ಕಾಕತೀಯರು

 ಮೊದಲಿಗೆ ಅನುಮಕೊಂಡ ಮತ್ತು ಅನಂತರ ವಾರಂಗಲ್ ರಾಜಧಾನಿಗಳಿಂದ ಆಂಧ್ರಪ್ರವೇಶದಲ್ಲಿ 12ನೆಯ ಶತಮಾನದಿಂದ ಸು. 200 ವರ್ಷಕಾಲ ಆಳಿದ ಮನೆತನದ ರಾಜರು. ಕಾಕತಿ. ಗ್ರಾಮ ಮತ್ತು ಈ ಗ್ರಾಮದ ದೇವತೆ ಕಾಕತೆಮ್ಮ-ಇವು ಕಾಕತೀಯ ಪದದ ಮೂಲವನ್ನು ಸೂಚಿಸುತ್ತವೆ.

 1ನೆಯ ಬೇತನಿಂದ ಈ ವಂಶದ ಚರಿತ್ರೆ ನಿಶ್ಚಿತವಾಗಿ ಗೊತ್ತಾಗಿದೆ. ಇವನು ಕಲ್ಯಾಣದ ಚಾಳುಕ್ಯ ಸಾಮ್ರಾಜ್ಯಕ್ಕೆ ಸೇರಿದ್ದ ತೆಲಂಗಾಣ ಪ್ರದೇಶದಲ್ಲಿ ಸಾಮಾನ್ಯ ನಾಯಕನಾಗಿದ್ದ. ಇವನ ಬಗ್ಗೆ ಹೆಚ್ಚಿನ ವಿವರಗಳು. ತಿಳಿದಿಲ್ಲ. ಅಧಿರಾಜ 1ನೆಯ ಸೋಮೇಶ್ವರ (1043-68) ಚೋಳರಾಜ್ಯದಲ್ಲಿ ಮಾಡಿದ ದಂಡಯಾತ್ರೆಯಲ್ಲಿ ಈತ ಭಾಗಹಿಸಿರಬಹುದು. ಇವನ ಮಗ 1ನೆಯ ಪ್ರೋಲ ಶತ್ರುದಮನ ಮಾಡಿ ಆ ಚಾಳುಕ್ಯ ದೊರೆಯಿಂದ ಅನುಮಕೊಂಡ ಸೀಮೆಯ ಸ್ವಾಮಿತ್ವವನ್ನು ಪಡೆದುಕೊಂಡ. ಇದು ಈ ವಂಶದ ಅಭ್ಯುದಯಕ್ಕೆ ನಾಂದಿ ಆಯಿತು. ಯುವರಾಜ ವಿಕ್ರಮಾದಿತ್ಯನ ಕೊಂಕಣ, ಚೋಳದೇಶ, ವೇಂಗಿ ಮತ್ತು ಚಕ್ರಕೋಟಗಳ ದಂಡಯಾತ್ರೆಯಗಳಲ್ಲಿ ಪ್ರೋಲ ಭಾಗಿಯಾಗಿ ಅತನ ವಿಜಯಕ್ಕೆ ಸಹಾಯಕನಾದ.

 ಇವನ ಮಗ ಇಮ್ಮಡಿ ಭೇತ (1075-1090) 6ನೆಯ ವಿಕ್ರಮಾದಿತ್ಯನಿಗೆ (1076-1126) ವಿರೋಧವಾಗಿ ವರ್ತಿಸಿ ಆತನ ಕ್ರೋಧಕ್ಕೆ ಈಡಾದರೂ ಅನಂತರ ಕ್ಷಮೆ ಕೋರಿ ತನ್ನ ಪಿತ್ರಾರ್ಜಿತ ರಾಜ್ಯವನ್ನು ಮತ್ತೆ ಸಂಪಾದಿಸಿಕೊಂಡ. ವಿಕ್ರಮಾದಿತ್ಯನ ಪರವಾಗಿ ಇವನು ಮಾಲ್ವದ ಪರಮಾರ ಉದಯಾದಿತ್ಯ, 1ನೆಯ ಕುಲೋತ್ತುಂಗ ಜೋಳ-ಇವರ ಮೇಲೆ ಜಯಗಳಿಸಿದ. ಸುಪ್ರೀತನಾದ ವಿಕ್ರಮಾದಿತ್ಯ ತ್ರಿಭುವನ ಮಲ್ಲ ಎಂಬ ಬಿರುದನ್ನೂ ಸಬ್ಬಿಸಾಯಿರ 1000 ಪ್ರಾಂತ್ಯವನ್ನೂ ಇವನಿಗೆ ಕೊಟ್ಟಂತೆ ಕಾಣುತ್ತದೆ.

 ಇಮ್ಮಡಿ ಪ್ರೋಲ ಇವನ ಅನಂತರ ಅಧಿಕಾರಕ್ಕೆ ಬಂದ (1115). ಈತ ಪರಾಕ್ರಮಿ, ಮಹಾತ್ವಾಕಾಂಕ್ಷಿ. ಆಗ 6ನೆಯ ವಿಕ್ರಮಾದಿತ್ಯನ ರಾಜ್ಯಭಾರ ಕೊನೆಯ ಹಂತ ಮುಟ್ಟಿತ್ತು. 1126ರಲ್ಲಿ ವಿಕ್ರಮಾದಿತ್ಯ ಮರಣ ಹೊಂದಿದ. ಅನಂತರ ಬಂದ ಚಾಳುಕ್ಯ ಅರಸರು ಸಮರ್ಥರಾಗಿರಲಿಲ್ಲ. ಈ ಸನ್ನಿವೇಶ ಪ್ರೋಲನ ರಾಜ್ಯ ವಿಸ್ತರಣಾಕಾಂಕ್ಷೆಯನ್ನು ಸಫಲಗೊಳಿಸಿತು. ಈತ ಕೊಂಡಪಲ್ಲಿಯ ಗೋವಿಂದರಾಜ ಮತ್ತು ಮಂತ್ರಕೂಟದ ಗುಂಡರನ್ನು ಸೋಲಿಸಿ, ಆ ಪ್ರದೇಶಗಳನ್ನು ವಶಪಡಿಸಿಕೊಂಡುದಲ್ಲದೆ ಚಾಳುಕ್ಯ ಚಕ್ರವರ್ತಿ ಮುಮ್ಮಡಿ ತೈಲನನ್ನು ಸೆರೆಹಿಡಿದು. ಅನಂತರ ದಯೆತೋರಿ ವಿಮುಕ್ತಿಗೊಳಿಸಿದನಲ್ಲದೆ ಚಾಳುಕ್ಯರ ಮಾಂಡಲಿಕತ್ವವನ್ನು ತ್ಯಜಿಸಿ ಸ್ವತಂತ್ರನಾದ. ಆರಂಭದಲ್ಲಿ ತೆಲಂಗಾಣದ ವಾರಂಗಲ್ ಮತ್ತು ಕರೀಂನಗರ ಜಿಲ್ಲೆಗಳ ಪ್ರದೇಶಕ್ಕೆ ಸೀಮಿತವಾಗಿದ್ದ ಕಾಕತೀಯ ಆಧಿಪತ್ಯ ಅನಂತರ ಗೋದಾವರೀ ಕೃಷ್ಣಾ ನದಿಗಳ ನಡುವಣ ಭೂಭಾಗವನ್ನೂ ವ್ಯಾಪಿಸಿತು. ಪ್ರೋಲ ಸು. 1158ರ ವರೆಗೆ ಜೀವಿಸಿದ್ದ.

 ಬಳಿಕ ಪಟ್ಟಕ್ಕೆ ಬಂದ ಪ್ರೋಲನ ಪುತ್ರ ರುದ್ರದೇವನಿಂದ ಕಾಕತೀಯ ಚರಿತ್ರೆಯಲ್ಲಿ ಸ್ವತಂತ್ರ ಸಾಮ್ರಾಜ್ಯಾಧಿಕಾರದ ಹೊಸ ಅಧ್ಯಾಯ ಪ್ರಾರಂಭವಾಗುತ್ತದೆ. ರುದ್ರದೇವ ಸಂಗ್ರಾಮವೀರ, ಪ್ರತಾಪಶಾಲಿ. ಇವನು ನೆರೆನಾಡಿನ ಹಲವು ನಾಯಕರೊಡನೆ ಯುದ್ಧಹೂಡಿ ಅವರ ರಾಜ್ಯಗಳನ್ನು ವಶಪಡಿಸಿಕೊಂಡ. ಇವನು ಜಯಿಸಿದ ವೈರಿಗಳಲ್ಲಿ ತೋಟ ನಾಯಕರು, ತೆಲುಗು ಚೋಳರು, ಮತ್ತು ಚಾಳುಕ್ಯ ಮುಮ್ಮಡಿ ತೈಲಪ ಪ್ರಮುಖರು, ಕರಾವಳಿಯ ಪ್ರದೇಶವನ್ನೂ ವೇಂಗಿ ಮಂಡಲವನ್ನೂ ಗೆಲ್ಲಲು ಇವನಿಗೆ ಸಾಧ್ಯವಾಗಲಿಲ್ಲ. ಆದರೂ ಇವನಿಗೆ ಗೋದಾವರಿ ಕೃಷ್ಣಾನದಿಗಳ ಮಧ್ಯದ ವಿಸ್ತಾರವಾದ ರಾಜ್ಯ ವಶವಾಗಿತ್ತು. ರುದ್ರದೇವ ತನ್ನ ಆಳ್ವಿಕೆಯ ಕೊನೆಯ ಭಾಗದಲ್ಲಿ ಅನುಮಕೊಂಡ ರಾಜಧಾನಿಯ ಪಕ್ಕದಲ್ಲಿ ಓರುಗಲ್ಲು (ಈಗಿನ ವಾರಂಗಲ್) ಎಂಬ ಹೊಸ ನಗರವನ್ನು ಕಟ್ಟಿಸಿದ. ಇದು ಮುಂದೆ ಇವರ ಆಳ್ವಿಕೆಯಲ್ಲಿ ಸಮಸ್ತ ಆಂಧ್ರಪ್ರದೇಶದ ರಾಜಧಾನಿಯಾಯಿತು. ಇತ್ತ ಕಾಕತೀಯರು ಊರ್ಜಿತವಾಗುತ್ತಿದ್ದಾಗ ಅತ್ತ ಪಶ್ಚಿಮದಲ್ಲಿ ಸೇವುಣರು ಪ್ರಬಲರಾಗುತ್ತಿದ್ದರು. ಈ ಪ್ರತಿಸ್ಪರ್ಧಿಗಳಲ್ಲಿ ರುದ್ರದೇವ ಸು. 1196ರಲ್ಲಿ ನಡೆದ ಸಮರದಲ್ಲಿ ಹತನಾದ.

 ರುದ್ರದೇವನ ಅನಂತರ (ಸು. 1195) ಪಟ್ಟಕ್ಕೆ ಬಂದ ಆತನ ತಮ್ಮ ಮಹಾದೇವ 3 ವರ್ಷ ಮಾತ್ರ ಅಧಿಕಾರದಲ್ಲಿದ್ದ. ಇವನು ಸೇವುಣರ ರಾಜಧಾನಿ ದೇವಗಿರಿಯ ಮೇಲೆ ದಾಳಿ ಮಾಡಿ ಸು. 1198ರಲ್ಲಿ ನಡೆದ ಕದನದಲ್ಲಿ ನಿಧನನಾದ. ಅದೇ ಕಾಲಕ್ಕೆ ಮಹಾದೇವನ ಮಗ ಗಣಪತಿದೇವ ಶತ್ರುಗಳ ಕೈಗೆ ಸಿಕ್ಕಿ ದೇವಗಿರಿಯ ಕಾರಾಗೃಹದಲ್ಲಿರಬೇಕಾಯಿತು. ಸ್ವಲ್ಪ ಕಾಲಾಂತರ ಸೆರೆಮನೆಯಿಂದ ಹೊರಬಂದ ಗಣಪತಿದೇವ ಮರಳಿ ತನ್ನ ರಾಜ್ಯಕ್ಕೆ ಬಂದಾಗ ಅಲ್ಲಿ ಅರಾಜಕತೆ ಉಂಟಾಗಿತ್ತು. ನೆರೆಯ ಅರಸರು ದಂಡೆತ್ತಿ ಬಂದಿದ್ದರು. ಈ ಅವ್ಯವಸ್ಥೆಯನ್ನು ಕೊನೆಗೊಳಿಸಿ. ಸೇನಾಪತಿ ರೇಚರ್ಲ ರುದ್ರ ಪುನಃ ಕಾಕತೀಯ ಪ್ರಭುತ್ವವನ್ನು ಸ್ಥಿರಗೊಳಿಸಿದ.

 ಗಣಪತಿದೇವ (1198 ರಿಂದ 1261) ಸು. 63 ವರ್ಷ ರಾಜ್ಯಭಾರ ಮಾಡಿದ. ಈತ ಪಟ್ಟಕ್ಕೆ ಬಂದಾಗ ಕಲ್ಯಾಣದ ಚಾಳುಕ್ಯರ ಮತ್ತು ಚೋಳರ ಸಾಮ್ರಾಜ್ಯಗಳು ಅಸ್ತಂಗತವಾಗಿ, ತುಂಡರಸರೂ ಪ್ರಾದೇಶಿಕ ಪಾಳೆಯಗಾರರೂ ತಲೆಯೆತ್ತಿ ರಾಜ್ಯಲಾಲಸೆಯಿಂದ ಕಾದಾಡುತ್ತಿದ್ದರು. ಶಕ್ತಿವಂತನೂ ಮಹತ್ತ್ವಾಕಾಂಕ್ಷಿಯೂ ರಾಜನೀತಿಚತುರನೂ ಕಾರ್ಯತತ್ಪರನೂ ಆದ ಗಣಪತಿ ಈ ಪರಿಸ್ಥಿತಿಯನ್ನು ತನ್ನ ರಾಜ್ಯಾಭಿವೃದ್ಧಿಗೆ ಬಳಸಿಕೊಂಡ. ಎಡೆಬಿಡದೆ ಅನೇಕ ಯುದ್ದಗಳನ್ನು ಮಾಡಿ, ಪೂರ್ವ ಕರಾವಳಿ ಪ್ರದೇಶದ ವೆಲನಾಡು ನಾಯಕರ ಪ್ರದೇಶವನ್ನು ಆಕ್ರಮಿಸಿದ. ಇದರಿಂದ ಕಾಕತೀಯ ಸಾಮ್ರಾಜ್ಯರೇಖೆ ಪೂರ್ವಸಾಗರದ ವರೆಗೆ ಚಾಚಿತು. ದಕ್ಷಿಣದಲ್ಲಿ ನೆಲ್ಲೂರಿನ ತೆಲುಗು ಚೋಳನಾಯಕರ ಸಹಾಯದಿಂದ ಇವನ ವರ್ಚಸ್ಸು ಬೆಳೆಯಿತು. ಈತ ಕಳಿಂಗದ ಪೂರ್ವಗಂಗರೊಡನೆ ಮತ್ತು ಮಧುರೆಯ ಪಾಂಡ್ಯರೊಡನೆ ಯುದ್ಧಮಾಡಿ ಅತ್ಯಂತ ಸಮರ್ಥನೆಂಬ ಖ್ಯಾತಿ ಗಳಿಸಿದ.

 ಗಣಪತಿ ದಕ್ಷ ಶಾಸಕ, ಪ್ರಜಾಹಿತ ಚಿಂತಕ. ಕೃಷಿ ವ್ಯಾಪಾರಗಳಿಗೆ ಪ್ರೋತ್ಸಾಹವಿತ್ತುದರಿಂದ ಆರ್ಥಿಕ ಅಭಿವೃದ್ಧಿ ಸಾಧ್ಯವಾಯಿತು. ಈತ ರಾಜಧಾನಿಯನ್ನು ಅನುಮಕೊಂಡದಿಂದ ಓರುಗಲ್ಲಿಗೆ (ವಾರಂಗಲ್ಲಿಗೆ) ಸ್ಥಳಾಂತರಿಸಿ ಅದರ ಸುತ್ತ ಭದ್ರವಾದ ಕೋಟೆ ಕಟ್ಟಿಸಿದ. ಈ ಕಾಲದಲ್ಲಿ ಕಾಕತೀಯ ರಾಜ್ಯಕ್ಕೆ ಸಾಮಾಜ್ಯದ ಘನತೆ ಬಂತು. ಮುಖ್ಯವಾಗಿ ತೆಲುಗು ಭಾಷೆಯ ನೆಲವನ್ನೆಲ್ಲ ಒಂದೇ ರಾಜ್ಯಶಾಸನಕ್ಕೆ ಒಳಪಡಿಸಿದ ಕೀರ್ತಿ ಇವನದು.

 ಗಣಪತಿಗೆ ಗುಂಡುಸಂತಾನವಿರಲಿಲ್ಲ : ರುದ್ರಾಂಬಾ (ರುದ್ರಮಹಾದೇವಿ) ಮತ್ತು ಗಣಪಾಂಬಾ (ಗಣಪಮಹಾದೇವಿ) ಇವರಿಬ್ಬರು ಅವನ ಪುತ್ರಿಯರು. ರುದ್ರಾಂಬಾ ಪೂರ್ವ ಚಾಳುಕ್ಯವಂಶದ ರಾಜಕುಮಾರ ವೀರಭದ್ರನನ್ನು ವರಿಸಿದ್ದಳು. ಗಣಪತಿದೇವ ಈಕೆಯನ್ನು ತನ್ನ ರಾಜ್ಯಕ್ಕೆ ಉತ್ತರಾಧಿಕಾರಿಣಿಯಾಗಿ ನೇಮಿಸಿ, ರುದ್ರದೇವ ಎಂಬ ಪುರಷನಾಮದಿಂದ ಕರೆದ. ಗಣಪತಿಗೆ ಮುಪ್ಪು ಬಂದಾಗ-1259ರ ಹೊತ್ತಿಗೆ-ರುದ್ರಮಹಾದೇವಿ ರಾಜ್ಯಭಾರದಲ್ಲಿ ಭಾಗವಹಿಸತೊಡಗಿದಳು. ಒಂದೆರಡು ವರ್ಷಗಳಲ್ಲಿ ಆತ ಅಧಿಕಾರದಿಂದ ನಿವೃತ್ತನಾದ. ಅನಂತರ ರಾಜಪುತ್ರಿಯೇ ರಾಜ್ಯಸೂತ್ರವನ್ನು ಸ್ವತಂತ್ರವಾಗಿ ವಹಿಸಿಕೊಂಡಳು. ಅನಂತರವೂ ಕೆಲವು ವರ್ಷಗಳ ಕಾಲ ಗಣಪತಿದೇವ ಬದುಕಿದ್ದ.

 ರುದ್ರಮಹಾದೇವಿ ರಾಜ್ಯಾಧಿಕಾರ ವಹಿಸಿಕೊಂಡದ್ದು ಕೆಲವು ರಾಜವಂಶದವರ ಮತ್ತು ನಾಯಕರ ಅಸಂತೋಷ ಮತ್ತು ಪ್ರತಿಭಟನೆಗಳಿಗೆ ಕಾರಣವಾಯಿತು. ಆದರೆ ರೇಚರ್ಲ ಪ್ರಸಾದಿತ್ಯ, ಗೋನಗನ್ನಯರೆಡ್ಡಿ ಮೊದಲಾದ ಹಲವು ಸ್ವಾಮಿನಿಷ್ಠ ಸಾಮಂತರ ಮತ್ತು ಅಧಿಕಾರಿಗಳ ಬೆಂಬಲ ದೊರೆತದ್ದರಿಂದ ಈಕೆ ತನ್ನ ರಾಜ್ಯಭಾರವನ್ನು 35 ವರ್ಷಗಳ ಕಾಲ (1261-1295) ಸ್ಥೈರ್ಯದಿಂದ ನಡೆಸಿದಳು. ಅಂತಶ್ಯತ್ರುಗಳಿಗಿಂತ ಹೆಚ್ಚಾಗಿ ಬಾಹ್ಯ ಶತ್ರುಗಳಿಂದ ಈಕೆಗೆ ಆತಂಕಗಳುಂಟಾದವು. ಹೊರಗಿನ ಶತ್ರುಗಳ ಪೈಕಿ ಪೂರ್ವದಲ್ಲಿ ಕಲಿಂಗದ ಗಜಪತಿ, ಪಶ್ಚಿಮದಲ್ಲಿ ಸೇವುಣರು ಮತ್ತು ದಕ್ಷಿಣದಲ್ಲಿ ಪಾಂಡ್ಯರು ಪ್ರಮುಖರು.

 ರುದ್ರಮಹಾದೇವಿ ಎಲ್ಲ ಗಂಡಾತರಗಳನ್ನೂ ಧೈರ್ಯದಿಂದ ಎದುರಿಸುತ್ತ ಸಮರ್ಥ ರೀತಿಯಿಂದ ರಾಜ್ಯಭಾರ ಮಾಡಿದಳು. ಪೂರ್ವಭಾಗದಲ್ಲಿ ಗೋದಾವರಿಯ ಮತ್ತು ವೆಂಗಿಯ ಪ್ರದೇಶಗಳು ಕೆಲಕಾಲ ಕೈಬಿಟ್ಟು ಹೋಗಿ ಮತ್ತೆ ಸ್ವಾಧೀನವಾದುವು. ಸೇವುಣರ ಆಕ್ರಮಣವನ್ನು ಶೌರ್ಯದಿಂದ ವಿರೋಧಿಸಿದಳು. ಪಾಂಡ್ಯರು ಆಕ್ರಮಿಸಿದ್ದ ಪ್ರದೇಶಗಳನ್ನು ಗೆದ್ದುಕೊಂಡಳು. ಈ ಸಮರಗಳಲ್ಲಿ ರುದ್ರಮಹಾದೇವಿಯ ಮಗಳ ಮಗನೂ ದತ್ತುಪುತ್ರನೂ ಆದ ಕುಮಾರ ರುದ್ರದೇವ ಪರಾಕ್ರಮದಿಂದ ಹೋರಾಡಿ ಜಯಗಳಿಸಿದ. ಆಂಧ್ರ ದೇಶದ ಮತ್ತು ಭಾರತದ ಚರಿತ್ರಾರ್ಹ ಮಹಿಳೆಯರಲ್ಲಿ ಈಕೆಯೂ ಒಬ್ಬಳು. ಸ್ತ್ರೀಯಾದರೂ ಈಕೆ ರಾಜಕಾರ್ಯದಲ್ಲಿಯೂ ಶೌರ್ಯ ಪರಾಕ್ರಮದಲ್ಲಿಯೂ ಯಾವ ರಾಜನಿಗೂ ಕಡಿಮೆಯಿರಲಿಲ್ಲ. ಪುರುಷವೇಷ ಧರಿಸಿ ಉತ್ಸಾಹದಿಂದ ಸಕಲ ರಾಜಕೀಯ ವ್ಯವಹಾರಗಳನ್ನೂ ನಿರ್ವಹಿಸುತ್ತಿದ್ದಳು. ಕೆಲವು ಸಂದರ್ಭಗಳಲ್ಲಿ ಸಮರಭೂಮಿಯಲ್ಲಿಯೂ ಮುನ್ನುಗ್ಗುತ್ತಿದ್ದದ್ದುಂಟು. ಈಕೆಯ ಆಳ್ವಿಕೆಯಲ್ಲಿ ಪ್ರಜೆಗಳು ಸುಖಸಮಾಧಾನಗಳಿಂದ ಬಾಳಿದರು.

 ರುದ್ರಮಹಾದೇವಿಯ ಮರಣಾನಂತರ ಕುಮಾರ ರುದ್ರದೇವ 1295ರಲ್ಲಿ ತನ್ನ 35ನೆಯ ವಯಸ್ಸಿನಲ್ಲಿ ಪಟ್ಟವೇರಿದ. ಇವನಿಗೆ ಪ್ರತಾಪರುದ್ರನೆಂದೂ ಹೆಸರಿತ್ತು. ಇವನಿಗೆ ರಾಜನೀತಿ ಯುದ್ಧನೀತಿಗಳಲ್ಲಿ ಸಾಕಷ್ಟು ಅನುಭವವಿತ್ತು. ಶತ್ರುಗಳ ಆಕ್ರಮಣವನ್ನು ವಿರೋಧಿಸಲು ಇವನು ಸೈನ್ಯವನ್ನು ಸಂಗ್ರಹಿಸಿ ಅದರ ಬಲವನ್ನೂ ಸಂಘಟನೆಯನ್ನೂ ಹೆಚ್ಚಿಸಿದ.

 ಈ ಹೊತ್ತಿಗೆ ದಿಲ್ಲಿಯ ಸಿಂಹಾಸನವನ್ನು ಆಕ್ರಮಿಸಿದ ಸುಲ್ತಾನ ಅಲ್ಲಾವುದ್ದೀನ್ ಖಿಲ್ಜಿ ಉತ್ತರ ಭಾರತದಲ್ಲಿ ತನ್ನ ಆಧಿಪತ್ಯವನ್ನು ಸ್ಥಿರಗೊಳಿಸಿ ದಕ್ಷಿಣ ಭಾರತವನ್ನು ಜಯಿಸುವ ಮಹತ್ತ್ವಾಕಾಂಕ್ಷೆಯಿಂದ ದಂಡಯಾತ್ರೆಗಳಲ್ಲಿ ತೊಡಗಿದ. 1303ರಲ್ಲಿ ಕಾಕತೀಯ ರಾಜ್ಯದ ಮೇಲೆ ನಡೆದ ದಂಡಯಾತ್ರೆಯಲ್ಲಿ ದಿಲ್ಲಿಯ ಸೇನೆ ಪರಾಭವ ಹೊಂದಿತು. ಅನಂತರ 1310ರಲ್ಲಿ ಸುಲ್ತಾನನ ಸೇನಾಪತಿ ಮಾಲಿಕ್ ಕಾಫೂರ್ ಪ್ರಚಂಡ ಸೈನ್ಯದೊಂದಿಗೆ ನುಗ್ಗಿ, ವಾರಂಗಲ್ ರಾಜಧಾನಿಗೆ ಮುತ್ತಿಗೆ ಹಾಕಿದ. ಪ್ರತಾಪರುದ್ರ ಸೋತು, ಅಪಾರ ಹಣ ಕೊಡಬೇಕಾಯಿತು. ಇದರಿಂದ ಆಂಧ್ರದಲ್ಲಿ ರಾಜಕೀಯ ಪರಿಸ್ಥಿತಿ ಅಸ್ಥಿರವಾಯಿತು.

 ಪ್ರತಾಪರುದ್ರ ಸುಲ್ತಾನನಿಗೆ ಕೊಡತಕ್ಕ ಪೊಗದಿಯನ್ನು ನಿಲ್ಲಿಸಿದನೆಂಬ ನೆಪಹೂಡಿ, ಸೈನ್ಯಾಧಿಕಾರಿ ಖುಸ್ರುಖಾನ 1318ರಲ್ಲಿ ವಾರಂಗಲ್ಲಿಗೆ ದಾಳಿಯಿಟ್ಟಾಗ ಪ್ರತಾಪರುದ್ರ ಪುನಃ ನಿರುಪಾಯನಾಗಿ ಕಪ್ಪ ತೆರಬೇಕಾಯಿತು. ಮುಂದೆ ದೆಹಲಿಯಲ್ಲಿ ರಾಜಕೀಯ ಕ್ರಾಂತಿ ನಡೆದು ಖಿಲ್ಜಿ ಸುಲ್ತಾನರ ಆಳ್ವಿಕೆ ಕೊನೆಗೊಂಡು 1320ರಲ್ಲಿ ತುಗಲಖ್ ಮನೆತನದ ಆಳ್ವಿಕೆ ಪ್ರಾರಂಭವಾಯಿತು. ಘಿಯಾಸುದ್ದೀನ್ ಈ ಮನೆತನದ ಮೊದಲ ಸುಲ್ತಾನ. ಈತ ತನ್ನ ಮಗ ಉಲುಫ್‍ಖಾನನನ್ನು 1323ರಲ್ಲಿ ತೆಲುಗಾಣದ ದಂಡಯಾತ್ರೆಗೆ ಕಳುಹಿಸಿದ. ಮೊದಲ ಸಲ ಈ ಆಕ್ರಮಣ ವಿಫಲವಾದುದರಿಂದ, ದೆಹಲಿಯ ಸೇನೆ ಬೇಗನೆ ಸುಸಂಘಟಿತವಾಗಿ ಎರಡನೆಯ ಸಲ ವಾರಂಗಲ್ಲಿನ ಮೇಲೆ ಎರಗಿತು. ಅಜಾಗರೂಕತೆಯಿಂದಾಗಿ ಪ್ರತಾಪರುದ್ರ ಈ ದಾಳಿಯನ್ನು ಎದುರಿಸಲಾರದೆ ಪರಾಜಯ ಹೊಂದಿ ರಾಜಧಾನಿಯನ್ನು ಶತ್ರುವಿನ ವಶಕ್ಕೆ ಒಪ್ಪಿಸಬೇಕಾಯಿತು. ಉಲುಘ್‍ಖಾನ್ ಅವನನ್ನೂ ಅವನ ಪರಿವಾರದವರನ್ನೂ ಬಂಧಿಸಿ ದಿಲ್ಲಿಗೆ ಕಳುಹಿಸಿದ. ಮಾರ್ಗದಲ್ಲಿ ಪ್ರತಾಪರುದ್ರ ಮೃತನಾದ. ಇವನ ಮರಣದೊಂದಿಗೆ ಕಾಕತೀಯರ ಆಳ್ವಿಕೆ ಮುಗಿಯಿತು. ತೆಲಂಗಾಣ ಪ್ರದೇಶದ ಮೇಲೆ ದೆಹಲಿಯ ಪ್ರಭುತ್ವ ಸ್ಥಾಪಿತವಾಯಿತು.        

 (ಪಿ.ಬಿ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ